ಚಟರ್ಜಿ, ಜೀವನಲಾಲ್

1880-1970. ಭಾರತದ ಒಬ್ಬ ವಿಪ್ಲವಕಾರ. 1889ರಲ್ಲಿ ಢಾಕಾ ಜಿಲ್ಲೆಯಲ್ಲಿ ಜನನ. ತಂದೆ ಜಾನಕೀನಾಥ ಚಟರ್ಜಿ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಕಲ್ಕತ್ತೆಯಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂದೆ ಇವರು ಕಾಲೇಜ್ ಸೇರಿದರಾದರೂ ಆ ವೇಳೆಗೆ ರಾಜಕೀಯದಲ್ಲಿ ಪಾತ್ರವಹಿಸಿದ್ದರಿಂದ ಇವರ ವಿದ್ಯಾಭ್ಯಾಸ ನಡುವೆಯೇ ನಿಂತು ಹೋಯಿತು.
ಜೀವನಲಾಲ್ ರಾಜಕೀಯ ಪ್ರವೇಶಿಸಿದಾಗ ಬಂಗಾಳ ವಿಭಜನೆಯ ವಿರುದ್ಧ ಚಳವಳಿ ಬಿರುಸಾಗಿತ್ತು. ಢಾಕಾ ಪಿತೂರಿ ಮೊಕದ್ದಮೆಯ ಸಂಬಂಧವಾಗಿ ಇವರು 1907ರಲ್ಲಿ ದಸ್ತಗಿರಿಯಾದರು. ಆದರೆ ಇವರ ಮೇಲಿನ ಆಪಾದನೆ ರುಜುವಾತಾಗದ್ದರಿಂದ ಇವರ ಬಿಡುಗಡೆಯಾಯಿತು. 1908ರಲ್ಲಿ ಆಲಿಪುರ ಪಿತೂರಿಯ ಮೊಕದ್ದಮೆಯ ಅನಂತರ ಇವರು ಕ್ರಾಂತಿಕಾರಿ ಜಟಿನ್ ಮುಖರ್ಜಿಯವರ ಪ್ರಭಾವಕ್ಕೆ ಒಳಗಾದರು. ಯುಗಾಂತರ ಪಕ್ಷದ ನಿರ್ದೇಶನದಲ್ಲಿ ನಡೆಯುತ್ತಿದ್ದ ಭಾರತ ಜರ್ಮನ್ ಪಿತೂರಿ ಬಯಲಾಗಿ ಜಟಿನ್ ಮುಖರ್ಜಿ ಪೋಲೀಸರೊಂದಿಗೆ ಕಾದಾಡುತ್ತ ಬಲೇಶ್ವರದಲ್ಲಿ ಪ್ರಾಣಬಿಟ್ಟರು. ಜಟಿನ್ ಮುಖರ್ಜಿಯವರು ನಡೆಸುತ್ತಿದ್ದ ಕಾರ್ಯಾಚರಣೆಯ ಹೊಣೆ ಜೀವನಲಾಲ್ ಮೇಲೆ ಬಿತ್ತು. 1916ರ ವರೆಗೂ ಇವರು ತಮ್ಮ ಕಾರ್ಯವನ್ನು ತಡಯಿಲ್ಲದೆ ನಡೆಸಿಕೊಂಡು ಬಂದರು. ಪಕ್ಷದ್ರೋಹಿಯೊಬ್ಬ ಇವರ ಸುಳಿವನ್ನು ಪೋಲೀಸರಿಗೆ ತಿಳಿಸಿದ, ಜೀವನಲಾಲರು ಬಂಧನಕ್ಕೊಳಗಾದರು.
1920ರಲ್ಲಿ ಜೀವನಲಾಲರ ಬಿಡುಗಡೆಯಾಯಿತು. ಇವರಿಗೆ ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಯಲ್ಲೂ ಅಹಿಂಸಾ ತತ್ತ್ವದಲ್ಲೂ ನಂಬಿಕೆ ಇರಲಿಲ್ಲವಾದರೂ ಜನರಲ್ಲಿ ರಾಜಕೀಯ ಪ್ರಜ್ಞೆಯನ್ನು ಚೇತನಗೊಳಿಸಲು ಆ ಚಳವಳಿಯಲ್ಲಿ ಭಾಗವಹಿಸಿದರು. ಆನಂತರ ಇವರು ಮುನ್ಷಿಗಂಜ್ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾದರು. ಜೊತೆಗೆ ತಮ್ಮ ಕ್ರಾಂತಿ ಕಾರ್ಯಗಳನ್ನೂ ಮುಂದುವರಿಸಿದರು.

ಗಾಂಧಿಯವರು ಅಸಹಕಾರ ಚಳವಳಿಯನ್ನು ಹಿಂದೆಗೆದುಕೊಂಡಾಗ ಜೀವನ ಲಾಲ್ ಚಟರ್ಜಿಯವರು ದೇಶಬಂಧು ಚಿತ್ತರಂಜನ ದಾಸರ ಸ್ವರಾಜ್ಯ ಪಕ್ಷದೊಂದಿಗೂ ನೇತಾಜಿ ಸುಭಾಷ್ ಚಂದ್ರ ಬೋಸರೊಂದಿಗೂ ಹೆಚ್ಚು ಸಂಪರ್ಕ ಬೆಳೆಸಿದರು. ನೇತಾಜಿ ಸುಭಾಷ್ ಚಂದ್ರ ಬೋಸರಿಗೆ ಬರ್ಮೀ ಭಾಷೆಯ ಪ್ರಥಮ ಪಾಠ ಹೇಳಿಕೊಟ್ಟವರು ಜೀವನಲಾಲ್ ಚಟರ್ಜಿ. ಭಾರತದಲ್ಲಿ ಕಮ್ಯುನಿಸ್ಟ್ ಚಳವಳಿ ಪ್ರಾರಂಭವಾದಾಗ ಅದರಲ್ಲಿ ಚಟರ್ಜಿ ಹೆಚ್ಚು ಆಸಕ್ತಿ ವಹಿಸಿದರು. ಬಂಗಾಲದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ಇವರಿಗೆ ವಹಿಸಬೇಕೆಂದು ತೃತೀಯ ಕಮ್ಯುನಿಸ್ಟ್ ಅಂತರರಾಷ್ಟ್ರೀಯ ಆಲೋಚಿಸಿತ್ತು. ಆದರೆ 1923ರಲ್ಲಿ ಇವರು ಮತ್ತೆ ಬಂಧನಕ್ಕೊಳಗಾದರು. ಬಂಗಾಲದಲ್ಲೂ ಬರ್ಮದಲ್ಲೂ ಇವರನ್ನು ಸೆರೆಯಲ್ಲಿಡಲಾಯಿತು. 1928ರಲ್ಲಿ ಅನಾರೋಗ್ಯದ ನಿಮಿತ್ತ ಇವರು ಬಿಡುಗಡೆಯಾದರು.

1930ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಘಟಿಸಿದ ಚಳವಳಿಯಲ್ಲಿ ಜೀವನಲಾಲರೂ ಮುಖ್ಯ ಪಾತ್ರ ವಹಿಸಿದರು. ಇವರನ್ನು ಬಂಗಾಳ ಪ್ರಾಂತೀಯ ಕಾಂಗ್ರೆಸ್ ಸಮಿತಿಗೆ ಕಾರ್ಯದರ್ಶಿಯಾಗಿ ಆರಿಸಲಾಯಿತು. ಅಷ್ಟರಲ್ಲಿ ಸರ್ಕಾರ ಇವರನ್ನು ಬಂಧಿಸಿ 1938ರ ವರೆಗೂ ಬಂಧನದಲ್ಲಿಟ್ಟಿತು. ಬಂಧನದಿಂದ ವಿಮೋಚನೆಯಾದ ಮೇಲೆ ಇವರು ಕಾಂಗ್ರೆಸಿನಲ್ಲಿ ಕ್ರಾಂತಿಕಾರಿಗಳ ವೇದಿಕೆಯೊಂದನ್ನು ನಿರ್ಮಿಸಲು ಯತ್ನಿಸಿದರು. 1940ರ ರಾಮಘಲ್ ಕಾಂಗ್ರೆಸ್ ಸಭೆಯಲ್ಲಿ ಈ ಬಗ್ಗೆ ಮಾತಾಡಿದರು. ಆದರೆ ಗಾಂಧಿಯವರ ಅಹಿಂಸಾ ತತ್ತ್ವವನ್ನೊಪ್ಪಿಕೊಂಡಿದ್ದ ಕಾಂಗ್ರೆಸಿನಲ್ಲಿ ಇವರ ಅಭಿಪ್ರಾಯಕ್ಕೆ ಮನ್ನಣೆ ದೊರಕಲಿಲ್ಲ. ಜೀವನಲಾಲರು ಇದನ್ನು ಪ್ರತಿಭಟಿಸಿ ಕಾಂಗ್ರೆಸನ್ನು ತ್ಯಜಿಸಿದರು. 1943ರಲ್ಲಿ ಇವರು ಡೆಮೊಕ್ರಾಟಿಕ್ ವ್ಯಾನ್ ಗಾರ್ಡ್ ಎಂಬ ಸಂಘವನ್ನು ಸ್ಥಾಪಿಸಿ ಕಮ್ಯುನಿಸ್ಟರಿಗೆ ಸಹಾಯ ಮಾಡಲಾರಂಭಿಸಿದರು. ಏಷ್ಯ ಬಿಟ್ಟು ತೊಲಗಿ ಚಳವಳಿಯ ಸಮಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಖಿಲ ಭಾರತ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಭಾರತೀಯ ಕೆಲಸಗಾರರ ಪಕ್ಷದ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು ಕೊನೆಯವರೆಗೂ ಆ ಪಕ್ಷದ ಏಳ್ಗೆಗಾಗಿ ಶ್ರಮಿಸಿ 1970ರ ಡಿಸೆಂಬರ್ 1ರಂದು ನಿಧನರಾದರು.

ಜೀವನಲಾಲ್ ಪ್ರಗತಿಪರರು, ಆಜನ್ಮಬ್ರಹ್ಮಚಾರಿ, ಜಾತಿಪದ್ಧತಿಯನ್ನೂ ಅಸ್ಪøಶ್ಯತೆಯನ್ನೂ ಇವರು ಖಂಡಿಸುತ್ತಿದ್ದರು. ಮಹಿಳೆಯರಲ್ಲಿ ಇವರಿಗೆ ವಿಶೇಷ ಗೌರವವಿತ್ತು. ಬ್ರಿಟಿಷ್ ದ್ವೇಷಿಯಾಗಿದ್ದರೂ ಪಾಶ್ಚಾತ್ಯ ಶಿಕ್ಷಣಕ್ಕೆ ಇವರ ವಿರೋಧವಿರಲಿಲ್ಲ. ರಾಜಕೀಯ ಮತ್ತು ಆರ್ಥಿಕ ಬಂಧನದಿಂದ ಜನಸಾಮಾನ್ಯರ ಬಿಡುಗಡೆಯೇ ನಿಜವಾದ ರಾಷ್ಟ್ರೀಯ ಸ್ವಾತಂತ್ರ್ಯವೆಂದು ಇವರು ನಂಬಿದ್ದರು. ಈ ನಂಬಿಕೆಯಿಂದಲೇ ಜೀವನಲಾಲರು ಕಾರ್ಮಿಕರ ಬಿಡುಗಡೆಗಾಗಿ ದುಡಿದರು. 

	ಜೀವನಲಾಲ್ ಚಟರ್ಜಿಯವರು ನವೀನ್ ಬಂಗ್ಲಾ ಮತ್ತು ಘನ ವಿಪ್ಲವ್ ಎಂಬ ಎರಡು ಬಂಗಾಳಿ ಪತ್ರಿಕೆಗಳನ್ನು ಸಂಪಾದಿಸುತ್ತಿದ್ದರು. ಇವರ ಅನೇಕ ಕೃತಿಗಳ ಪೈಕಿ ಹೆಸರಾದಂಥವು ಉದರೆರ್ ಚಿಂತಾ (ಹೊಟ್ಟೆಯ ಚಿಂತೆ) ಮತ್ತು ಸಾಂಪ್ರದಾಯಿಕತಾರ್ ಗ್ಲಾನಿ (ಜಾತೀಯತೆಯ ಕಳಂಕ).								*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ